Sunday, 8 October 2023

ಮಂಗಳ!

 ಮಂಗಳಂ ಜಯ ಜಯ

 ಮಂಗಳಂ ಜಯ ಜಯ

 ಮಂಗಳಂ ಜಯ ಜಯ

ಮಹಾದೇವನಿಗೆ ।।ಪ।।

ಬನ್ನಿಯ ಎಲಿಯಾಗ 

ಹನ್ನೊಂದಾರುತಿ ಮಾಡಿ

ಅಣ್ಣ ಬಸವಣ್ಣಗ ಬೆಳಗಿದೆ ನಾ ।।೧।।

ಆಳದ ಎಲಿಯಾಗ 

ಅರವತ್ತೊಂದ ಏಡಿ ಮಾಡಿ 

ಅಣ್ಣ ಬಸವಣ್ಣಗ ಬೆಳಗಿದೆ ನಾ ।।೨।।

ನಿಂಬಿಯ ಎಲಿಯಾಗ 

ತುಂಬಿದಾರುತಿ ಮಾಡಿ 

ಅಣ್ಣ ಬಸವಣ್ಣಗ ಬೆಳಗಿದೆ ನಾ ।।೩।।

----------------------------------------------

----------------------------------------------

ಕರ್ಪೂರಾರುತೀ ಬೆಳಗಿರೆ 

ಕಾರುಣ್ಯ ಮೃಗಾಹಾರ ದೇವಗೆ 

ನೀಲಕಂಠನ ನಿಜಮಗೋಚರ 

ಭಾಲಚಂದ್ರ ಭರಣಗೆ ।।ಪ|| 

ಬಾಲೆಗೊಲಿದನು ಹಾಲಸವಿದನು 

ಲೋಲ ಶ್ರೀ ಗುರುರಾಯಗೆ ।।೧।।

ವಾರಿಜೋದ್ಭವ ಶಿರವ ಹರಿದನು 

ಮದಹರ ಮಹಾದೇವಗೆ 

ಘೋರ ತಾಪವ ದೂರಮಾಡುವ 

ಶೂರ ಷಣ್ಮುಕ ನಯ್ಯಗೆ ।।೨।।

ಶರಣು ಜನಕೆ ವರವನಿತ್ತನು 

ಪರಮ ಪಾರ್ವತಿ ಅರಸಗೆ 

ಧರೆಯೊಳಗೆ ಅಧಿಕವಾದ 

ಸೊನ್ನದ ಸಿದ್ಧರಾಮಗೆ ।।೩।।


ಓಂ ಚೈತನ್ಯಮ್ ಶಾಶ್ವತಂ ಉಮಾತೀತಂ ನಿರಂಜನಂ 

ನಾಗಬಿಂದು ಕಾಲಾತೀತಂ ತಸ್ಮೈಶ್ರೀ ಗುರುವೇ ನಮಃ ।।    

----------------------------------------------

----------------------------------------------

ಜ್ಞಾನಪೂರಣಂ ಜಗಜ್ಯೋತಿ 
ನಿರ್ಮಲವಾದ ಮನವೇ ಕರ್ಪೂರಾರುತೀ ।।ಪ।।

ಅನುದಿನ ಗುರುವಿನೊಳನುಗೂಡಿ ಭಕ್ತಿಯಲಿ 
ಜನನ ಮರಣರಹಿತ ಜಂಗಮಕೆ ಬೆಳಗಿರೆ ।।೧।।

ನಾನೀನೆಂಬುದ ಬೀಡೀರಿ 
ಸದ್ಗುರು ಪ್ರಾಪ್ತಿಗಿ ಜ್ಞಾನಿಗಳೊಡನಾಡಿರಿ 
ಸ್ವಾನುಭವದ ಸುಖ ತಾನೇ ಕೈ ಸೇರುವುದು 
ಅನುಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರೆ ।।೨।।

ನಾನಾ ಜನ್ಮದ ಕತ್ತಲೆ 
ಕಳೆದಳಿದು ಬೇಗ 
ಮಾನವ ಜನ್ಮದ ಬೆಳಕಿನಲಿ 
ಹೀನ ವಿಷಯದಾಸೆ ಹಿಂದುಳಿದು ಗುರುವಿನ 
ಧ್ಯಾನವೇ ಗತಿಯೆಂದು ಮನವೊಪ್ಪಿ ಬೆಳಗಿರೆ ।।೩।।

ಅಷ್ಟವರ್ಣದ ಸ್ಥೂಲವು ಮಾನವ ಜನ್ಮ 
ಹುಟ್ಟಿ ಬರುವದು ದುರ್ಲಭವು 
ಕೋಟ್ಟಾನೆ ಗುರು ಎನಗೆ ಮುಟ್ಟಿದ ಫಲದಿಂದ 
ಹುಟ್ಟಿದ ಮಗ ಸಿದ್ಧನ ಹೆಸರಿಟ್ಟು ಬೆಳಗಿರೆ ।।೪।।
 
----------------------------------------------

----------------------------------------------







 

Monday, 2 October 2023

ವರವ ಪಾಲಿಸೆ ತಾಯಿ ಉಧೋ ಎಲ್ಲಮ್ಮ

 ವರವ ಪಾಲಿಸೆ ತಾಯಿ ಉಧೋ ಎಲ್ಲಮ್ಮ 

ಕರವ ಮುಗಿದು ಬೇಡುವೆ ನಿನಗೆ ಉಧೋ ಎಲ್ಲಮ್ಮ ।।ಪ|| 

ನೀರು ಮೀಸಲೇ ನಿನಗ ಹೂವ ಮೀಸಲೇ 

ನೀರು ಎಂದರೆ ಕಪ್ಪಿ ಎಂಜಲ 

ಹೂವ ಎಂದರೆ ಹುಳದ ಎಂಜಲ 

ಯಾವುದು ಮೀಸಲೇ ನಿನಗ ಯಾವುದು ಮೀಸಲೇ ।।೧।।

ಕಾಯಿ ಮೀಸಲೇ ನಿನಗ ಕರ್ಪೂರ ಮೀಸಲೇ  

ಕಾಯಿ ಎಂದರೆ ಕಲ್ಲಿನ ಎಂಜಲ 

ಕರ್ಪೂರ ಎಂದರೆ ಬೆಂಕಿ ಎಂಜಲ 

ಯಾವುದು ಮೀಸಲೇ ನಿನಗ ಯಾವುದು ಮೀಸಲೇ ।।೨।।

ಏಡೆಯ ಮೀಸಲೇ ನಿನಗ ಮನವ ಮೀಸಲೇ 

ಏಡೆ ಎಂದರೆ ಎಲೆಯ ಎಂಜಲ 

 ಮನ ಎಂದರೆ ಪಾಪದ ಎಂಜಲ 

ಯಾವುದು ಮೀಸಲೇ ನಿನಗ ಯಾವುದು ಮೀಸಲೇ ।।೩।।

ಹಾಲು ಮೀಸಲೇ ನಿನಗ ತುಪ್ಪ ಮೀಸಲೇ 

ಹಾಲು ಎಂದರೆ ಹೆಪ್ಪಿನ ಎಂಜಲ 

ತುಪ್ಪ ಎಂದರೆ ಉಪ್ಪಿನ ಎಂಜಲ 

ಯಾವುದು ಮೀಸಲೇ ನಿನಗ ಯಾವುದು ಮೀಸಲೇ ।।೪।।

ಗುಡ್ಡಕ ಬಂದೇನೇ ನಿನ್ನ ಪಾದಕ ಬಿದ್ದೇನೇ 

ಪಾಪವ ಮಾಡಿದ ಪಾಮರ ನಾನು 

ನರಕದಿ ಬಿದ್ದು ಕೊರಗುತಲಿರುವೆ ಉಧ್ದಾರ ಮಾಡೇ

ತಾಯಿ ಉಧ್ದಾರ ಮಾಡೇ ।।೫।।

Sunday, 1 October 2023

ದೇವರೀಗ ಹೋಗೋಣು ಬಾರಮ್ಮ

 ದೇವರೀಗ ಹೋಗೋಣು  ಬಾರಮ್ಮ 

ಯಾರ ಗೊಡವಿ  ನಮಗೇನಮ್ಮ ।।ಪ।।

ಎಣ್ಣೆ ಪಣತೆ ಪತ್ರಿ  ಜೋಡಮ್ಮ 

ಜ್ಯೋತಿ  ಇರುವ ಮನೆ ಲೇಸಮ್ಮ ।।೧।।

ನೂರಾರು ದಿನದ ಸಂತೆಮ್ಮ 

ಸಂತಿಯ  ತಲಿಮ್ಯಾಲ  ಕುಂತೆಮ್ಮ ।।೨।।

ವಸುಧೆಯೋಳು ನಮ್ಮ ಶಿಶುನಾಳ 

ಗುರುಗೋವಿಂದಜ್ಜನ  ನೆನೆಯಮ್ಮ ।। ೩।।

ಸೋತು ನಡೇವ ಸೊಸೆಯು ಚಂದ

 ಸೋತು ನಡೇವ  ಸೊಸೆಯು ಚಂದ 

ಅಪ್ಪಿಕೊಂಡು ಆನಂದ ಪಡುವ ಅತ್ತಿ ಮಾವ ಚಂದ ।।ಪ|| 

ಸತ್ಯಶೀಲ ತಿಳುವಳಿಕುಳ್ಳ ಪುತ್ರನು ಚಂದ 

ಅಕ್ಕ ಮಹಾದೇವಿಯ ವಚನವು ಚಂದ ।।೧।।

ಚನ್ನಮಲ್ಲಿಕಾರ್ಜುನ ದೇವಾ 

ನಿಮ್ಮ ಸೇವೆಯು ಚಂದ ।।೨।।

ರಂಗಯ್ಯ ಬಾರೋ ನಮ್ಮ ಮನೆಗೇ

 ರಂಗಯ್ಯ ಬಾರೋ ನಮ್ಮ ಮನೇಗೇ  ।।ಪ|| 

ತಂದೆಗೆ ನೋರೆ ಹಾಲು ತಂದೇನಿ ನೀ ಬಾರೋ 

ಕುಡಿದು ಮಂಚದ ಮೇಲೆ ಮಲಗು ಬಾ ।।೧।।

ರಂಗಯ್ಯ ಬಾರೋ ನಮ್ಮ ಮನೇಗೇ

ಬೆಣ್ಣಿ ತಂದೇನಿ ಬಾರೋ ಅನ್ನವ ಮಿಕ್ಕುವಂತಃ 

ಉಂಡು ಮಂಚದ ಮೇಲೆ ಮಲಗು ಬಾ ।।೨।।

ರಂಗಯ್ಯ ಬಾರೋ ನಮ್ಮ ಮನೇಗೇ

ದೇಶದೊಳಗ ನಮ್ಮ ವಾಸುಳ್ಳ ಪಂಢರಪುರ 

ತಂದೆ ಶ್ರೀ ಪುರಂದರ ವಿಠಲರಾಯ ।।೩।।

ಬಾರೋ ನಮ್ಮ ಮನೇಗೇ

ಕುಮಾರ ನೀ ಸುಮಾರ

 ಸುಮಾರ ನೀ ಸುಮಾರ, ಕುಮಾರ ನೀ ಸುಮಾರ 

ಮಾನವ ಜನ್ಮಕ ಬಂದು ಸುಪುತ್ರ ನಾದಮ್ಯಾಲ

ಕುಮಾರ ನೀ ಸುಮಾರ ।ಪ|| 

ಹಿರಿಯರಿಲ್ಲದ ಮನೆ ಸುಮಾರ 

ಗುರುವಿಲ್ಲದ ಮಠ ಸುಮಾರ ।।೧।।

ಮಾತು ಕೇಳದ ಮಗ ಸುಮಾರ 

ರೀತಿ ಬಿಟ್ಟು ನಡೇವ ಸೋಸಿ ಸುಮಾರ ।।೨।।

ಹಣ್ಣು ಇಲ್ಲದ ವನ ಸುಮಾರ 

ಹೆಣ್ಣು ಇಲ್ಲದ ಮನೆ ಸುಮಾರ ।।೩।।


ಉಳವಿಯ ಬಸವಣ್ಣ

 ಉಳವಿಯ ಬಸವಣ್ಣ ಉಳಿಯೋ ನಮ್ಮನಿಯಾಗ 

ನೀರ ಕಾದಾವೀಗ ಜಳಕಕ ನೀರ ಕಾದಾವೀಗ ।।ಪ।।

ನೀರನೇ ಕಾದಾವೋ ಜಳಕಕ್ಕ ನಮ್ಮ ಬಸವ

ಹಾಲ ಕಾದವೀಗ ಕುಡಿಯಾಕ ಹಾಲ ಕಾದಾವೀಗ ।।೧।।

ಎಡಕ ಅಡಕಿಯ ವನ ಬಲಕ ಬಾಳೆಯ ಬನ 

ನಡಕ ನಮ್ಮ ಬಸವಣ್ಣ ನೆಲೆಸ್ಯಾನ ನಮ್ಮ ಬಸವಣ್ಣ ।।೨।।

ನಿಂಬಿಯ ಗಿಡ ಹುಟ್ಟಿ ಲಿಂಗಕ್ಕೆ ನೆರಳಾಗಿ 

ಬಂದ  ಜಂಗಮರೀಗೆ ಬಸವಣ್ಣ ಬಂದ  ಜಂಗಮರೀಗೆ ।।೩।।

ಬಸವಣ್ಣ ಹುಟ್ಟಲಿ ಹೊಸ ಪ್ಯಾಟೆ ಕಟ್ಟಲಿ 

ರಸಬಾಳೆಯ ಕಬ್ಬ ಚಿಗಿಯಲಿ ರಸಬಾಳೆಯ ಕಬ್ಬ ।।೪।।

ರಸಬಾಳಿ  ಕಬ್ಬ ಚಿಗಿಯಲು ಕಣಕಿಕೊಪ್ಪ 

ಬಸವಣ್ಣನ ತೇರ ಎಳೆಯಲಿ ಬಸವಣ್ಣನ ತೇರ ।।೫।।


ಕಣಕಿಕೊಪ್ಪದಲ್ಲಿನ ಶ್ರಾವಣ

ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸದ್ದೇ  ಒಂದು ವೈಶಿಷ್ಠತೇ. ಸಾಕಷ್ಟು ಪೂಜೇ ಪುನಸ್ಕಾರಗಳು, ಪ್ರವಚನಗಳು, ಈ ಮಾಸದಲ್ಲಿ ನಡೆಯುತ್ತವೆ. ಎಷ್ಟೋ ಜನ ಮಾಂಸಹಾರಿಗಳು ಈ ಒಂದು ತಿಂಗಳು ಸಸ್ಯಾಹಾರಿಗಳಾಗುತ್ತಾರೆ.  ಹೀಗೆ ಒಂದು ಶ್ರಾವಣ ಮಾಸದಲ್ಲಿ ನಾನು ನಮ್ಮ ಹಳ್ಳಿಯಿಂದ ಕೆಲಸ ಮಾಡುತ್ತಿದ್ದೆ. ಕೆಲಸ ಅಂದರೆ ಹೊಲ ಗದ್ದೆಯದೇನಲ್ಲ, ಬದಲಾಗಿ ನನ್ನ ಕಂಪನಿಯ WFH - ವರ್ಕ್ ಫ್ರಮ್ ಹೋಮ್ - ಗೊತ್ತಾಗಿರಬೇಕಲ್ಲ Covid-೧೯ ಮಹಾಮಾರಿಯ ಕೃಪೆ.  

ನಮ್ಮ ಊರಲ್ಲಿ ಹೂಲಿ ಅಜ್ಜನ ಮಠವಿದೆ. ಜನರಿಗೆ ಈ ಮಠದ ಮೇಲೆ ಅಪಾರ ಶ್ರದ್ಧೆ ಮತ್ತು ನಂಬಿಕೆ ಇದೆ. ವರ್ಷದಲ್ಲಿ ಎರಡು ಸಾರಿ ಜಾತ್ರೆ ನಡೆಯುತ್ತೆ. ಶ್ರಾವಣದ  ಕಡೇಯ ಸೋಮವಾರದಂದು ಮತ್ತೆ ಭಾರತ ಹುಣ್ಣಿಮೆ ಹಿಂದಿನ ದಿನದಂದು.  

ಶ್ರಾವಣದ ಮೊದಲ ದಿನದಿಂದಲೇ ಭಜನೆ ಪ್ರಾರಂಭವಾಗುತ್ತದೆ. ಪ್ರತಿದಿನ ಬೆಳಿಗ್ಗೆ ೪ ಘಂಟೆಗೆ ಭಜನಾ ಮೇಳದವರು ಜಳಕ ಮಾಡಿ ಮಡಿಯಿಂದ ತಯಾರಾಗುತ್ತಾರೆ. ಭಜನಾ ಗುಂಪಿನಲ್ಲಿ ಒಬ್ಬರು ಹೂಲಿ ಅಜ್ಜನ ಭಾವಚಿತ್ರವನ್ನು ಹೊತ್ತಿರುತ್ತಾರೆ.  ಭಜನೆಯ ಗುಂಪು ಒಂದು ಡಗ್ಗಾ ಮತ್ತು ಅನೇಕ ತಾಳಗಳಿಂದ ಕೂಡಿರುತ್ತದೆ. ಜಾನಪದ ಭಕ್ತಿ ಗೀತೆಗಳನ್ನು ಲಯಬದ್ಧವಾಗಿ ಹಾಡುತ್ತ ಈ ಗುಂಪು ಇಡೀ ಊರನ್ನು ಸುತ್ತುತ್ತದೆ. ಜನರು ಸಹ ಅಷ್ಟೇ ಮಡಿವಂತಿಕೆಯಿಂದ, ಗುಂಪು ತಮ್ಮ ಮನೆಯ ಮುಂದೆ ಬರುವಷ್ಟರಲ್ಲಿ, ಮನೆ ಅಂಗಳವನ್ನು ಚೆನ್ನಾಗಿ ಕಸಗೂಡಿಸಿ,  ಒಂದು ಕೊಡ ನೀರು, ಉದ್ದಿನಕಡ್ಡಿ, ಕುಂಕುಮ ಮತ್ತು ವಿಭೂತಿಗಳೊಂದಿಗೆ ತಯಾರಾರಿರುತ್ತಾರೆ. ಅಜ್ಜನ ಭಾವಚಿತ್ರ ಹೊತ್ತಿರುವ ವ್ಯಕ್ತಿ ಕಾಲಿಗೆ ನೀರು ಹಾಕಿ, ಮುಂದೆ ನಡೆದು ಹೋಗುವ ದಾರಿಗೆ ಸಹಿತ ನೀರಿನಿಂದ ಮಡಿಮಾಡುತ್ತಾರೆ. ಕುಂಕುಮ, ವಿಭೂತಿಯನ್ನು ಅಜ್ಜನ ಭಾವಚಿತ್ರಕ್ಕೆ ಹಚ್ಚಿ ನಮಸ್ಕರಿಸುತ್ತಾರೆ. ಸ್ವತಃ ಅಜ್ಜನೆ ನಡೆದು ಹೋಗುತ್ತಿರವಂತೆ ಭಾಸವಾಗುತ್ತದೆ. ಯಾವುದೇ ಜಾತಿ, ಭೇದ, ಭಾವ ಇಲ್ಲದೇ ಎಲ್ಲರೂ ಅಜ್ಜನ ಸೇವೆ ಮಾಡುತ್ತಾರೆ. ಈ  ರೀತಿ ಭಜನಾ ಮೇಳ ಊರು ಸುತ್ತಿ ಬಂದು, ಊರಿನ ಕಲ್ಮೇಶ್ವರನ ಗುಡಿಯಲ್ಲಿ ಮಂಗಳಾರತಿ ಪದಗಳೊಂದಿಗೆ, ಭಜನೆ ಕೊನೆಗೊಳ್ಳುತ್ತದೆ. ಅಷ್ಟರಲ್ಲಿ ಕಲ್ಮೇಶ್ವರನ ಪೂಜೆಯು ಮುಗಿಯುತ್ತದೆ, ಭಕ್ತರು ನೈವೇದ್ಯಕ್ಕೆಂದು ನೀಡಿದ ಪ್ರಸಾದ, ಭಜನೆ ತಂಡದ ಎಲ್ಲರಿಗೂ ಪ್ರಸಾದವಾಗಿ ಹಂಚಲ್ಪಡುತ್ತದೆ

ಮನೆಯಿಂದ ಕೆಲಸ ಮಾಡುತಿದ್ದ ನನ್ನನ್ನು ಈ ಭಜನೆ ಕೂಗಿ ಕರೆಯಿತು. ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ನಾನು ಸಹಿತ ಈ ಭಜನೆ ಮೇಳದಲ್ಲಿ ಸೇರುತ್ತಿದ್ದೆ. ಮೊದಮೊದಲು ತಾಳ ಹಾಕಲು ಬರುತ್ತಿರಲಿಲ್ಲ ಹಾಡುಗಳು ಬರುತ್ತಿರಲಿಲ್ಲ. ದಿನ ಕಳೆದಂತೆ, ಕೈಗಳು ತನ್ನಿಂದ ತಾನೇ ಲಯಬದ್ಧವಾಗಿ ತಾಳ ಹಾಕಲಾರಂಭಿಸಿದವು . ಹೂಲಿ ಅಜ್ಜನ ಕೃಪೆ ಮತ್ತು ಮೇಳದ ಉತ್ತೇಜನ ನನಗೆ ಪುಷ್ಟಿ ನೀಡಿತು. ಹಾಡುಗಳನ್ನು ಕಲಿತೆ ಮತ್ತು ಹಾಡಿಯೇ ತೀರಿದೆ. ಎಷ್ಟೋ ಜನ ಗೇಲಿ ಮಾಡಿದರು, ನಗರವಾಸಿ ನೀನು ನಿನಗ್ಯಾಕೊ ಈ ಭಾಜನಪದಗಳೆಲ್ಲ ಅಂತ, ನಾನು ಮಾತ್ರ ಇದಕ್ಕೆ ಕಿವಿಗೊಡಲಿಲ್ಲ ನನ್ನ ಗಮನ ಇವುಗಳನ್ನೆಲ್ಲ ಕಲಿಯುವ ಕಡೆ ಇತ್ತು. ಸಾಕಷ್ಟು ಹಾಡುಗಳು ಜಾನಪದ ಗೀತೆಗಳು - ಪೀಳಿಗೆಯಿಂದ  ಪೀಳಿಗೆಗೆ ಮೌಖಿಕವಾಗಿ ಬಂದಾವಂತಹವು. ಇನ್ನು ಕೆಲವು ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭು, ಸರ್ವಜ್ಞನ ವಚನಗಳು, ಮತ್ತು ಸಂತ ಶಿಶುನಾಳ ಶರೀಫ ವಿರಚಿತ ಹಾಡುಗಳು. ಎಲ್ಲ ಹಾಡುಗಳನ್ನು ಬರೆದಿಟ್ಟು ಅಂತರ್ಜಾಲದಲ್ಲಿ ಹುಡುಕಾಡಿ ಅವುಗಳ ಪಾರಮಾರ್ಥಿಕ ಅರ್ಥ ತಿಳಿಯಲು ಪ್ರಯತ್ನಿಸಿದೆ. ಆದರೆ ಸಾಕಷ್ಟು ಹಾಡುಗಳು ಸಿಗಲೇ ಇಲ್ಲ. 

ನಾನು ಕಲಿತ ಎಲ್ಲ ಹಾಡುಗಳನ್ನು ಒಂದೆಡೆ ಬರೆದಿಡುವ ಪ್ರಯತ್ನ ಮಾಡಿದ್ದೇನೆ.  

ಅಜಗಜಾಂತರ! ವ್ಯತ್ಯಾಸ ನಗರಕ್ಕ ಮತ್ತ ಹಳ್ಳಿಗ

Covid-೧೯ ಮಹಾಮಾರಿ ಇಡೀ ಜಗತ್ತನ್ನೇ ನಲುಗಿಸಿ ಬಿಟ್ಟಿತ್ತು, ಅಂದ ಮೇಲೆ ನಾವೇನು ಹೊರತೆನೂ ಇರಲಿಲ್ಲ. ಅದೃಷ್ಟವಶಾತ್ ನಮ್ಮ ಮನೆಯಲ್ಲಿ ಯಾರಿಗೂ ಇದು ಬಾಧಿಸಲಿಲ್ಲ - ದೇವರು ದೊಡ್ಡವನು ಅಂದು ಕೊಳ್ಳೋಣ ಅಥವಾ ಪೂರ್ವ ಜನ್ಮದ ಫಲ ಅಂದುಕೊಳ್ಳೋಣ.  ವೈಜ್ಞಾನಿಕವಾಗಿ ಹೇಳೋದಾದರೆ ನಮ್ಮ ಬೇರು ಹಳ್ಳಿಯಿಂದ ಇದ್ದಿದ್ದರಿಂದ ಬಹುಶಃ  ನಮ್ಮೆಲ್ಲರ ರೋಗ ನಿರೋಧಕ ಶಕ್ತಿ ಚೆನ್ನಾಗಿರಬಹುದು . ನಮ್ಮ ಬೇರು ಹಳ್ಳಿಯಿಂದ ಅನ್ನೋಕಿಂತ ಹೆಚ್ಚಾಗಿ ನಮ್ಮೆಲ್ಲರ ಬಾಲ್ಯ ಕಳೆದದ್ದು ಹಳ್ಳಿಗಳಲ್ಲೇ! ಬೆಳಿಗ್ಗೆಯಿಂದ  ಸಂಜೆವರೆಗೂ ಅಲ್ಲ, - ರಾತ್ರಿ ಮಲಗೋವರೆಗೂ 


ಬರಿಗಾಲಲ್ಲೇ ಓಡಾಟ, ಮಣ್ಣಲ್ಲೇ ಆಟ,

ಬಿಸಿಲು ಗಾಳಿಯೊಂದಿಗಿನ ಒಡನಾಟ,

ಮೊದಲ ಮಳೆಯಲ್ಲಿ ಕಳ್ಳೇ ಮಳ್ಳೇ ಸುತ್ತಾಟ,

ನಿಸರ್ಗವೇ ಕೊಟ್ಟಿತ್ತು ನಮಗೆ ಉಚಿತ ಪಾಠ,

ಹೆಚ್ಚಿನ ರೋಗನಿರೋಧಕ ಶಕ್ತಿಯ ಊಟ!  

ಅದಕ್ಕೆ ಹೇಳೋದಲ್ಲವೇ "ಓಣಿ ಮಗು ಬೆಳೀತು ಕೋಣೆ ಮಗು ಕೊಳಿತು" ಅಂತ. ಅದೇನೇ ಇರಲಿ "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಅಲ್ಲವೇ.

ಹೇಳುತ್ತಾರೆ! "ಜನರ ಬಾಯಲ್ಲಿ ಬಂದದ್ದು ಸುಳ್ಳಾಗೋದು ಕಡಿಮೆ ಅಂತ". "ಬೆಂಗಳೂರಲ್ಲಿ ನೀವು ಹಾಗೆ ಸುಮ್ಮನೆ ಒಂದು ಚಿಕ್ಕ ಕಲ್ಲು ಎಸೆದರೆ ಅದು ಒಂದು ನಾಯಿಗೆ ತಾಗುತ್ತೆ ಇಲ್ಲಾಂದ್ರೆ ಒಂದು ಸಾಫ್ಟ್ವೇರ್ ಇಂಜಿನಿಯರಗೆ ತಾಗುತ್ತೆ ಅಂತ"! ಇದರ ಮೇಲೆ ನಿಮಗೆ ಅರ್ಥ ಆಗಿರ್ಬೇಕು ಬೆಂಗಳೂರಿಗೆ ಬಂದು ನೆಲೆಸಿರುವ ನನ್ನ ಕಾಯಕ ಅರ್ಥಾತ್ ಕೆಲಸ --- ಅಗ್ಗದಿ ಖರೆ! ಅಂದರೆ ಸರಿಯಾಗಿ ಊಹಿಸಿದಿರಿ! ಅಕ್ಷರಶಃ ಸಾಫ್ಟ್ವೇರ್ ಇಂಜಿನಿಯರ್!  ಹಾಂ! ಅಂದ ಹಾಗೆ ಈ ಮಹಾಮಾರಿಯಿಂದ ಇಡೀ ಜಗತ್ತೇ ತತ್ತರಿಸಿತ್ತು.   ವಿಶ್ವ ಅರೋಗ್ಯ ಸಂಸ್ಥೆ ಎಲ್ಲರಿಗೂ ಮನೆಯಿಂದ ಕೆಲಸ ಮಾಡಲು ಸಲಹೆ ಕೊಟ್ಟಿತ್ತು. ನಾನು ಕೆಲವು ದಿನಗಳ ಕಾಲ ಮನೆಯಿಂದನೇ ಕೆಲಸ ಮಾಡಿದೆ, ದಿನಗಳು ಕಳೆದು ತಿಂಗಳುಗಳೇ ಆದವು, ಬರೋಬ್ಬರಿ ಎಂಟು  ತಿಂಗಳು, ಈ  ಮಹಾಮಾರಿ ಕಡಿಮೆ ಆಗುವ ಯಾವ ಸೂಚನೆಗಳು ಕಾಣಲೇ ಇಲ್ಲ. ಸಾರ್ವಜನಿಕ ವಾಹನಗಳ ಸೌಕರ್ಯಗಳಿಲ್ಲ, ಊಟಕ್ಕೆ ಹೋಟೆಲ್ಲುಗಳಿಲ್ಲ. ಒಂದು ಕಾರಗಾಡಿ  ಬಾಡಿಗೆ ಮಾಡಿಕೊಂಡು ಊರಿಗೆ ಹೊರಟೆವು - ನಮ್ಮ ಪ್ರೀತಿಯ ಉಪ್ಪಿಟ್ಟು ಕಟ್ಟಿಕೊಳ್ಳುವದನ್ನ ನಾವೇನು ಮರಿಲಿಲ್ಲ . 

ಅರ್ಧ ದಾರಿ ಕ್ರಮಿಸಿ, ಹಸಿವಾತು, ಗಾಡಿ  ನಿಲ್ಲಿಸಿ ಎಲ್ಲರೂ ಉಪ್ಪಿಟ್ಟು ತಿಂದೆವು. ಆಮೇಲೆ ನನಗೊಂದು ಯೋಚನೆ ಶುರುವಾಯಿತು! -  "ಬೆಂಗಳೂರಲ್ಲಿ ಈ ಮಹಾಮಾರಿ ಸಿಕ್ಕಾಪಟ್ಟೆ ಆವರಿಸಿತ್ತು. ಆರೋಗ್ಯಇಲಾಖೆ ಸಮಾಜದಲ್ಲಿ ಬೆರೆಯೋದನ್ನು ತಪ್ಪಿಸಿ ಮತ್ತುಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಸಲಹೆ ನೀಡಿತ್ತು. ಅದನ್ನ ನಾವು ಒಂದು  ಚಾಚೂ ತಪ್ಪದೇ  ಅನುಸರಿಸಿದ್ದೇವು. ಕೊರೋನಾ ಇದೊಂದು  ವಿಚಿತ್ರ ವೈರಸ್. ನೋಡಲು ಚೆನ್ನಾಗೆ ಕಾಣಿಸೋ ವ್ಯಕ್ತಿ ಕೂಡ ಈ ವೈರಸನ ವಾಹಕನಿರಬಹುದು".  ಊರಿಗೆ ಹೋದ ಮೇಲೆ ಜನ ನಮ್ಮನ್ನ ಊರಲ್ಲಿ ಇರಲು ಬಿಡುತ್ತಾರೋ ಇಲ್ಲವೋ ಎಂಬ ಗಲಿಬಿಲಿ! ನಾವೆಲ್ಲಿ ಸುಮ್ಮನೆ ಊರಿನವರಿಗೆ ತೊಂದರೆ ಮಾಡುತ್ತೇವೋ ಅನ್ನೋದು ಇನ್ನೊಂದು ವಿಚಾರ! 

ಸಂಜೆ ಸುಮಾರು ಊರಿಗೆ ತಲುಪಿದೆವು, ಸಾಕಷ್ಟು ಅನುಮಾನಗಳು ನನ್ನ ತಲೆಯಲ್ಲಿ ಓಡುತಿದ್ದವು ಈ ವೈರಸನ ಬಗ್ಗೆ. ಊರಿನಲ್ಲಿರೋ ನಮ್ಮ ಓಣಿ ಜನ, ನನ್ನ ಗೆಳೆಯರು, ನನ್ನ ತಮ್ಮನ ಜೊತೇಗೆ ನಮ್ಮ ಕಾರಗಾಡಿ ಸುತ್ತ ನೆರೆದರು. ಇವರೆಲ್ಲರೂ ನಮ್ಮನ್ನ ವಾಪಸಾಗಲು ಹೇಳಬಹುದು ಅಂತ, ನಾನು ಅಂದು ಕೊಂಡೆ! ಆದರೆ ಆಗಿದ್ದೇ ಬೇರೆ, ಎಲ್ಲರು ಖುಷಿಯೋ ಖುಷಿ -- ಎಷ್ಟು ದಿನ ಆಗಿತ್ತ, ನಿಮ್ಮನ್ನೆಲ್ಲ ನೋಡಿ ಅಂದರು! ನಾವೆಲ್ಲ ಬೆಂಗಳೂರಿಂದ ಬಂದೇವಿ ನೀವು ಸ್ವಲ್ಪ ದೂರ ಇರಿ ಅಂದ್ರೆ, "ಹಣೆ ಬರಹ ಹಿಂಗೇ ಇದ್ರ ಹಂಗ ಆಕ್ಕೇತಿ" ನೀ ತಲಿ ಕೆಡಿಸಕೋಬೇಡ, ಇದ್ರು ಜೊತೆಗೆ ಸತ್ತರು ಜೊತೆಗೆ ಅಂದರು ಎಲ್ಲರು. 

ಅಜಗಜಾಂತರ ವ್ಯತ್ಯಾಸ  ನಗರಕ್ಕ ಮತ್ತ ಹಳ್ಳಿಗ!