Sunday 1 October 2023

ಕಣಕಿಕೊಪ್ಪದಲ್ಲಿನ ಶ್ರಾವಣ

ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸದ್ದೇ  ಒಂದು ವೈಶಿಷ್ಠತೇ. ಸಾಕಷ್ಟು ಪೂಜೇ ಪುನಸ್ಕಾರಗಳು, ಪ್ರವಚನಗಳು, ಈ ಮಾಸದಲ್ಲಿ ನಡೆಯುತ್ತವೆ. ಎಷ್ಟೋ ಜನ ಮಾಂಸಹಾರಿಗಳು ಈ ಒಂದು ತಿಂಗಳು ಸಸ್ಯಾಹಾರಿಗಳಾಗುತ್ತಾರೆ.  ಹೀಗೆ ಒಂದು ಶ್ರಾವಣ ಮಾಸದಲ್ಲಿ ನಾನು ನಮ್ಮ ಹಳ್ಳಿಯಿಂದ ಕೆಲಸ ಮಾಡುತ್ತಿದ್ದೆ. ಕೆಲಸ ಅಂದರೆ ಹೊಲ ಗದ್ದೆಯದೇನಲ್ಲ, ಬದಲಾಗಿ ನನ್ನ ಕಂಪನಿಯ WFH - ವರ್ಕ್ ಫ್ರಮ್ ಹೋಮ್ - ಗೊತ್ತಾಗಿರಬೇಕಲ್ಲ Covid-೧೯ ಮಹಾಮಾರಿಯ ಕೃಪೆ.  

ನಮ್ಮ ಊರಲ್ಲಿ ಹೂಲಿ ಅಜ್ಜನ ಮಠವಿದೆ. ಜನರಿಗೆ ಈ ಮಠದ ಮೇಲೆ ಅಪಾರ ಶ್ರದ್ಧೆ ಮತ್ತು ನಂಬಿಕೆ ಇದೆ. ವರ್ಷದಲ್ಲಿ ಎರಡು ಸಾರಿ ಜಾತ್ರೆ ನಡೆಯುತ್ತೆ. ಶ್ರಾವಣದ  ಕಡೇಯ ಸೋಮವಾರದಂದು ಮತ್ತೆ ಭಾರತ ಹುಣ್ಣಿಮೆ ಹಿಂದಿನ ದಿನದಂದು.  

ಶ್ರಾವಣದ ಮೊದಲ ದಿನದಿಂದಲೇ ಭಜನೆ ಪ್ರಾರಂಭವಾಗುತ್ತದೆ. ಪ್ರತಿದಿನ ಬೆಳಿಗ್ಗೆ ೪ ಘಂಟೆಗೆ ಭಜನಾ ಮೇಳದವರು ಜಳಕ ಮಾಡಿ ಮಡಿಯಿಂದ ತಯಾರಾಗುತ್ತಾರೆ. ಭಜನಾ ಗುಂಪಿನಲ್ಲಿ ಒಬ್ಬರು ಹೂಲಿ ಅಜ್ಜನ ಭಾವಚಿತ್ರವನ್ನು ಹೊತ್ತಿರುತ್ತಾರೆ.  ಭಜನೆಯ ಗುಂಪು ಒಂದು ಡಗ್ಗಾ ಮತ್ತು ಅನೇಕ ತಾಳಗಳಿಂದ ಕೂಡಿರುತ್ತದೆ. ಜಾನಪದ ಭಕ್ತಿ ಗೀತೆಗಳನ್ನು ಲಯಬದ್ಧವಾಗಿ ಹಾಡುತ್ತ ಈ ಗುಂಪು ಇಡೀ ಊರನ್ನು ಸುತ್ತುತ್ತದೆ. ಜನರು ಸಹ ಅಷ್ಟೇ ಮಡಿವಂತಿಕೆಯಿಂದ, ಗುಂಪು ತಮ್ಮ ಮನೆಯ ಮುಂದೆ ಬರುವಷ್ಟರಲ್ಲಿ, ಮನೆ ಅಂಗಳವನ್ನು ಚೆನ್ನಾಗಿ ಕಸಗೂಡಿಸಿ,  ಒಂದು ಕೊಡ ನೀರು, ಉದ್ದಿನಕಡ್ಡಿ, ಕುಂಕುಮ ಮತ್ತು ವಿಭೂತಿಗಳೊಂದಿಗೆ ತಯಾರಾರಿರುತ್ತಾರೆ. ಅಜ್ಜನ ಭಾವಚಿತ್ರ ಹೊತ್ತಿರುವ ವ್ಯಕ್ತಿ ಕಾಲಿಗೆ ನೀರು ಹಾಕಿ, ಮುಂದೆ ನಡೆದು ಹೋಗುವ ದಾರಿಗೆ ಸಹಿತ ನೀರಿನಿಂದ ಮಡಿಮಾಡುತ್ತಾರೆ. ಕುಂಕುಮ, ವಿಭೂತಿಯನ್ನು ಅಜ್ಜನ ಭಾವಚಿತ್ರಕ್ಕೆ ಹಚ್ಚಿ ನಮಸ್ಕರಿಸುತ್ತಾರೆ. ಸ್ವತಃ ಅಜ್ಜನೆ ನಡೆದು ಹೋಗುತ್ತಿರವಂತೆ ಭಾಸವಾಗುತ್ತದೆ. ಯಾವುದೇ ಜಾತಿ, ಭೇದ, ಭಾವ ಇಲ್ಲದೇ ಎಲ್ಲರೂ ಅಜ್ಜನ ಸೇವೆ ಮಾಡುತ್ತಾರೆ. ಈ  ರೀತಿ ಭಜನಾ ಮೇಳ ಊರು ಸುತ್ತಿ ಬಂದು, ಊರಿನ ಕಲ್ಮೇಶ್ವರನ ಗುಡಿಯಲ್ಲಿ ಮಂಗಳಾರತಿ ಪದಗಳೊಂದಿಗೆ, ಭಜನೆ ಕೊನೆಗೊಳ್ಳುತ್ತದೆ. ಅಷ್ಟರಲ್ಲಿ ಕಲ್ಮೇಶ್ವರನ ಪೂಜೆಯು ಮುಗಿಯುತ್ತದೆ, ಭಕ್ತರು ನೈವೇದ್ಯಕ್ಕೆಂದು ನೀಡಿದ ಪ್ರಸಾದ, ಭಜನೆ ತಂಡದ ಎಲ್ಲರಿಗೂ ಪ್ರಸಾದವಾಗಿ ಹಂಚಲ್ಪಡುತ್ತದೆ

ಮನೆಯಿಂದ ಕೆಲಸ ಮಾಡುತಿದ್ದ ನನ್ನನ್ನು ಈ ಭಜನೆ ಕೂಗಿ ಕರೆಯಿತು. ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ನಾನು ಸಹಿತ ಈ ಭಜನೆ ಮೇಳದಲ್ಲಿ ಸೇರುತ್ತಿದ್ದೆ. ಮೊದಮೊದಲು ತಾಳ ಹಾಕಲು ಬರುತ್ತಿರಲಿಲ್ಲ ಹಾಡುಗಳು ಬರುತ್ತಿರಲಿಲ್ಲ. ದಿನ ಕಳೆದಂತೆ, ಕೈಗಳು ತನ್ನಿಂದ ತಾನೇ ಲಯಬದ್ಧವಾಗಿ ತಾಳ ಹಾಕಲಾರಂಭಿಸಿದವು . ಹೂಲಿ ಅಜ್ಜನ ಕೃಪೆ ಮತ್ತು ಮೇಳದ ಉತ್ತೇಜನ ನನಗೆ ಪುಷ್ಟಿ ನೀಡಿತು. ಹಾಡುಗಳನ್ನು ಕಲಿತೆ ಮತ್ತು ಹಾಡಿಯೇ ತೀರಿದೆ. ಎಷ್ಟೋ ಜನ ಗೇಲಿ ಮಾಡಿದರು, ನಗರವಾಸಿ ನೀನು ನಿನಗ್ಯಾಕೊ ಈ ಭಾಜನಪದಗಳೆಲ್ಲ ಅಂತ, ನಾನು ಮಾತ್ರ ಇದಕ್ಕೆ ಕಿವಿಗೊಡಲಿಲ್ಲ ನನ್ನ ಗಮನ ಇವುಗಳನ್ನೆಲ್ಲ ಕಲಿಯುವ ಕಡೆ ಇತ್ತು. ಸಾಕಷ್ಟು ಹಾಡುಗಳು ಜಾನಪದ ಗೀತೆಗಳು - ಪೀಳಿಗೆಯಿಂದ  ಪೀಳಿಗೆಗೆ ಮೌಖಿಕವಾಗಿ ಬಂದಾವಂತಹವು. ಇನ್ನು ಕೆಲವು ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭು, ಸರ್ವಜ್ಞನ ವಚನಗಳು, ಮತ್ತು ಸಂತ ಶಿಶುನಾಳ ಶರೀಫ ವಿರಚಿತ ಹಾಡುಗಳು. ಎಲ್ಲ ಹಾಡುಗಳನ್ನು ಬರೆದಿಟ್ಟು ಅಂತರ್ಜಾಲದಲ್ಲಿ ಹುಡುಕಾಡಿ ಅವುಗಳ ಪಾರಮಾರ್ಥಿಕ ಅರ್ಥ ತಿಳಿಯಲು ಪ್ರಯತ್ನಿಸಿದೆ. ಆದರೆ ಸಾಕಷ್ಟು ಹಾಡುಗಳು ಸಿಗಲೇ ಇಲ್ಲ. 

ನಾನು ಕಲಿತ ಎಲ್ಲ ಹಾಡುಗಳನ್ನು ಒಂದೆಡೆ ಬರೆದಿಡುವ ಪ್ರಯತ್ನ ಮಾಡಿದ್ದೇನೆ.  

No comments:

Post a Comment