Sunday 1 October 2023

ಅಜಗಜಾಂತರ! ವ್ಯತ್ಯಾಸ ನಗರಕ್ಕ ಮತ್ತ ಹಳ್ಳಿಗ

Covid-೧೯ ಮಹಾಮಾರಿ ಇಡೀ ಜಗತ್ತನ್ನೇ ನಲುಗಿಸಿ ಬಿಟ್ಟಿತ್ತು, ಅಂದ ಮೇಲೆ ನಾವೇನು ಹೊರತೆನೂ ಇರಲಿಲ್ಲ. ಅದೃಷ್ಟವಶಾತ್ ನಮ್ಮ ಮನೆಯಲ್ಲಿ ಯಾರಿಗೂ ಇದು ಬಾಧಿಸಲಿಲ್ಲ - ದೇವರು ದೊಡ್ಡವನು ಅಂದು ಕೊಳ್ಳೋಣ ಅಥವಾ ಪೂರ್ವ ಜನ್ಮದ ಫಲ ಅಂದುಕೊಳ್ಳೋಣ.  ವೈಜ್ಞಾನಿಕವಾಗಿ ಹೇಳೋದಾದರೆ ನಮ್ಮ ಬೇರು ಹಳ್ಳಿಯಿಂದ ಇದ್ದಿದ್ದರಿಂದ ಬಹುಶಃ  ನಮ್ಮೆಲ್ಲರ ರೋಗ ನಿರೋಧಕ ಶಕ್ತಿ ಚೆನ್ನಾಗಿರಬಹುದು . ನಮ್ಮ ಬೇರು ಹಳ್ಳಿಯಿಂದ ಅನ್ನೋಕಿಂತ ಹೆಚ್ಚಾಗಿ ನಮ್ಮೆಲ್ಲರ ಬಾಲ್ಯ ಕಳೆದದ್ದು ಹಳ್ಳಿಗಳಲ್ಲೇ! ಬೆಳಿಗ್ಗೆಯಿಂದ  ಸಂಜೆವರೆಗೂ ಅಲ್ಲ, - ರಾತ್ರಿ ಮಲಗೋವರೆಗೂ 


ಬರಿಗಾಲಲ್ಲೇ ಓಡಾಟ, ಮಣ್ಣಲ್ಲೇ ಆಟ,

ಬಿಸಿಲು ಗಾಳಿಯೊಂದಿಗಿನ ಒಡನಾಟ,

ಮೊದಲ ಮಳೆಯಲ್ಲಿ ಕಳ್ಳೇ ಮಳ್ಳೇ ಸುತ್ತಾಟ,

ನಿಸರ್ಗವೇ ಕೊಟ್ಟಿತ್ತು ನಮಗೆ ಉಚಿತ ಪಾಠ,

ಹೆಚ್ಚಿನ ರೋಗನಿರೋಧಕ ಶಕ್ತಿಯ ಊಟ!  

ಅದಕ್ಕೆ ಹೇಳೋದಲ್ಲವೇ "ಓಣಿ ಮಗು ಬೆಳೀತು ಕೋಣೆ ಮಗು ಕೊಳಿತು" ಅಂತ. ಅದೇನೇ ಇರಲಿ "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಅಲ್ಲವೇ.

ಹೇಳುತ್ತಾರೆ! "ಜನರ ಬಾಯಲ್ಲಿ ಬಂದದ್ದು ಸುಳ್ಳಾಗೋದು ಕಡಿಮೆ ಅಂತ". "ಬೆಂಗಳೂರಲ್ಲಿ ನೀವು ಹಾಗೆ ಸುಮ್ಮನೆ ಒಂದು ಚಿಕ್ಕ ಕಲ್ಲು ಎಸೆದರೆ ಅದು ಒಂದು ನಾಯಿಗೆ ತಾಗುತ್ತೆ ಇಲ್ಲಾಂದ್ರೆ ಒಂದು ಸಾಫ್ಟ್ವೇರ್ ಇಂಜಿನಿಯರಗೆ ತಾಗುತ್ತೆ ಅಂತ"! ಇದರ ಮೇಲೆ ನಿಮಗೆ ಅರ್ಥ ಆಗಿರ್ಬೇಕು ಬೆಂಗಳೂರಿಗೆ ಬಂದು ನೆಲೆಸಿರುವ ನನ್ನ ಕಾಯಕ ಅರ್ಥಾತ್ ಕೆಲಸ --- ಅಗ್ಗದಿ ಖರೆ! ಅಂದರೆ ಸರಿಯಾಗಿ ಊಹಿಸಿದಿರಿ! ಅಕ್ಷರಶಃ ಸಾಫ್ಟ್ವೇರ್ ಇಂಜಿನಿಯರ್!  ಹಾಂ! ಅಂದ ಹಾಗೆ ಈ ಮಹಾಮಾರಿಯಿಂದ ಇಡೀ ಜಗತ್ತೇ ತತ್ತರಿಸಿತ್ತು.   ವಿಶ್ವ ಅರೋಗ್ಯ ಸಂಸ್ಥೆ ಎಲ್ಲರಿಗೂ ಮನೆಯಿಂದ ಕೆಲಸ ಮಾಡಲು ಸಲಹೆ ಕೊಟ್ಟಿತ್ತು. ನಾನು ಕೆಲವು ದಿನಗಳ ಕಾಲ ಮನೆಯಿಂದನೇ ಕೆಲಸ ಮಾಡಿದೆ, ದಿನಗಳು ಕಳೆದು ತಿಂಗಳುಗಳೇ ಆದವು, ಬರೋಬ್ಬರಿ ಎಂಟು  ತಿಂಗಳು, ಈ  ಮಹಾಮಾರಿ ಕಡಿಮೆ ಆಗುವ ಯಾವ ಸೂಚನೆಗಳು ಕಾಣಲೇ ಇಲ್ಲ. ಸಾರ್ವಜನಿಕ ವಾಹನಗಳ ಸೌಕರ್ಯಗಳಿಲ್ಲ, ಊಟಕ್ಕೆ ಹೋಟೆಲ್ಲುಗಳಿಲ್ಲ. ಒಂದು ಕಾರಗಾಡಿ  ಬಾಡಿಗೆ ಮಾಡಿಕೊಂಡು ಊರಿಗೆ ಹೊರಟೆವು - ನಮ್ಮ ಪ್ರೀತಿಯ ಉಪ್ಪಿಟ್ಟು ಕಟ್ಟಿಕೊಳ್ಳುವದನ್ನ ನಾವೇನು ಮರಿಲಿಲ್ಲ . 

ಅರ್ಧ ದಾರಿ ಕ್ರಮಿಸಿ, ಹಸಿವಾತು, ಗಾಡಿ  ನಿಲ್ಲಿಸಿ ಎಲ್ಲರೂ ಉಪ್ಪಿಟ್ಟು ತಿಂದೆವು. ಆಮೇಲೆ ನನಗೊಂದು ಯೋಚನೆ ಶುರುವಾಯಿತು! -  "ಬೆಂಗಳೂರಲ್ಲಿ ಈ ಮಹಾಮಾರಿ ಸಿಕ್ಕಾಪಟ್ಟೆ ಆವರಿಸಿತ್ತು. ಆರೋಗ್ಯಇಲಾಖೆ ಸಮಾಜದಲ್ಲಿ ಬೆರೆಯೋದನ್ನು ತಪ್ಪಿಸಿ ಮತ್ತುಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಸಲಹೆ ನೀಡಿತ್ತು. ಅದನ್ನ ನಾವು ಒಂದು  ಚಾಚೂ ತಪ್ಪದೇ  ಅನುಸರಿಸಿದ್ದೇವು. ಕೊರೋನಾ ಇದೊಂದು  ವಿಚಿತ್ರ ವೈರಸ್. ನೋಡಲು ಚೆನ್ನಾಗೆ ಕಾಣಿಸೋ ವ್ಯಕ್ತಿ ಕೂಡ ಈ ವೈರಸನ ವಾಹಕನಿರಬಹುದು".  ಊರಿಗೆ ಹೋದ ಮೇಲೆ ಜನ ನಮ್ಮನ್ನ ಊರಲ್ಲಿ ಇರಲು ಬಿಡುತ್ತಾರೋ ಇಲ್ಲವೋ ಎಂಬ ಗಲಿಬಿಲಿ! ನಾವೆಲ್ಲಿ ಸುಮ್ಮನೆ ಊರಿನವರಿಗೆ ತೊಂದರೆ ಮಾಡುತ್ತೇವೋ ಅನ್ನೋದು ಇನ್ನೊಂದು ವಿಚಾರ! 

ಸಂಜೆ ಸುಮಾರು ಊರಿಗೆ ತಲುಪಿದೆವು, ಸಾಕಷ್ಟು ಅನುಮಾನಗಳು ನನ್ನ ತಲೆಯಲ್ಲಿ ಓಡುತಿದ್ದವು ಈ ವೈರಸನ ಬಗ್ಗೆ. ಊರಿನಲ್ಲಿರೋ ನಮ್ಮ ಓಣಿ ಜನ, ನನ್ನ ಗೆಳೆಯರು, ನನ್ನ ತಮ್ಮನ ಜೊತೇಗೆ ನಮ್ಮ ಕಾರಗಾಡಿ ಸುತ್ತ ನೆರೆದರು. ಇವರೆಲ್ಲರೂ ನಮ್ಮನ್ನ ವಾಪಸಾಗಲು ಹೇಳಬಹುದು ಅಂತ, ನಾನು ಅಂದು ಕೊಂಡೆ! ಆದರೆ ಆಗಿದ್ದೇ ಬೇರೆ, ಎಲ್ಲರು ಖುಷಿಯೋ ಖುಷಿ -- ಎಷ್ಟು ದಿನ ಆಗಿತ್ತ, ನಿಮ್ಮನ್ನೆಲ್ಲ ನೋಡಿ ಅಂದರು! ನಾವೆಲ್ಲ ಬೆಂಗಳೂರಿಂದ ಬಂದೇವಿ ನೀವು ಸ್ವಲ್ಪ ದೂರ ಇರಿ ಅಂದ್ರೆ, "ಹಣೆ ಬರಹ ಹಿಂಗೇ ಇದ್ರ ಹಂಗ ಆಕ್ಕೇತಿ" ನೀ ತಲಿ ಕೆಡಿಸಕೋಬೇಡ, ಇದ್ರು ಜೊತೆಗೆ ಸತ್ತರು ಜೊತೆಗೆ ಅಂದರು ಎಲ್ಲರು. 

ಅಜಗಜಾಂತರ ವ್ಯತ್ಯಾಸ  ನಗರಕ್ಕ ಮತ್ತ ಹಳ್ಳಿಗ!

No comments:

Post a Comment