ವರವ ಪಾಲಿಸೆ ತಾಯಿ ಉಧೋ ಎಲ್ಲಮ್ಮ
ಕರವ ಮುಗಿದು ಬೇಡುವೆ ನಿನಗೆ ಉಧೋ ಎಲ್ಲಮ್ಮ ।।ಪ||
ನೀರು ಮೀಸಲೇ ನಿನಗ ಹೂವ ಮೀಸಲೇ
ನೀರು ಎಂದರೆ ಕಪ್ಪಿ ಎಂಜಲ
ಹೂವ ಎಂದರೆ ಹುಳದ ಎಂಜಲ
ಯಾವುದು ಮೀಸಲೇ ನಿನಗ ಯಾವುದು ಮೀಸಲೇ ।।೧।।
ಕಾಯಿ ಮೀಸಲೇ ನಿನಗ ಕರ್ಪೂರ ಮೀಸಲೇ
ಕಾಯಿ ಎಂದರೆ ಕಲ್ಲಿನ ಎಂಜಲ
ಕರ್ಪೂರ ಎಂದರೆ ಬೆಂಕಿ ಎಂಜಲ
ಯಾವುದು ಮೀಸಲೇ ನಿನಗ ಯಾವುದು ಮೀಸಲೇ ।।೨।।
ಏಡೆಯ ಮೀಸಲೇ ನಿನಗ ಮನವ ಮೀಸಲೇ
ಏಡೆ ಎಂದರೆ ಎಲೆಯ ಎಂಜಲ
ಮನ ಎಂದರೆ ಪಾಪದ ಎಂಜಲ
ಯಾವುದು ಮೀಸಲೇ ನಿನಗ ಯಾವುದು ಮೀಸಲೇ ।।೩।।
ಹಾಲು ಮೀಸಲೇ ನಿನಗ ತುಪ್ಪ ಮೀಸಲೇ
ಹಾಲು ಎಂದರೆ ಹೆಪ್ಪಿನ ಎಂಜಲ
ತುಪ್ಪ ಎಂದರೆ ಉಪ್ಪಿನ ಎಂಜಲ
ಯಾವುದು ಮೀಸಲೇ ನಿನಗ ಯಾವುದು ಮೀಸಲೇ ।।೪।।
ಗುಡ್ಡಕ ಬಂದೇನೇ ನಿನ್ನ ಪಾದಕ ಬಿದ್ದೇನೇ
ಪಾಪವ ಮಾಡಿದ ಪಾಮರ ನಾನು
ನರಕದಿ ಬಿದ್ದು ಕೊರಗುತಲಿರುವೆ ಉಧ್ದಾರ ಮಾಡೇ
ತಾಯಿ ಉಧ್ದಾರ ಮಾಡೇ ।।೫।।
No comments:
Post a Comment